ಅನುರಾಧಾ ಟಿ.ಕೆ. ಒಬ್ಬ ಭಾರತೀಯ ವಿಜ್ಞಾನಿ. ಇವರು ಭಾರತೀಯ ಬಾಹ್ಯಾಕಾಶ ಸಂಶೋಧನೆ ಸಂಸ್ಥೆ (ಇಸ್ರೋ)ದಲ್ಲಿ ಯೋಜನಾ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ಜಿಎಸ್ಎಟಿ -೧೨ ಮತ್ತು ಜಿಎಸ್ಎಟಿ -೧೦ ಉಪಗ್ರಹಗಳ ಉಡಾವಣಾ ಕಾರ್ಯದಲ್ಲಿ ಕೆಲಸ ಮಾಡಿದ್ದಾರೆ. == ಆರಂಭಿಕ ಜೀವನ == ಅನುರಾಧಾ ಟಿ.ಕೆ. ರವರು ೩೦ ಎಪ್ರಿಲ್ ೧೯೬೦ರಂದು ಬೆಂಗಳೂರಿನಲ್ಲಿ ಜನಿಸಿದರು. ಅವರು ಬೆಂಗಳೂರಿನ ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜಿನಿಂದ ಎಲೆಕ್ಟ್ರಾನಿಕ್ಸ್ ನಲ್ಲಿ ಸ್ನಾತಕೋತರ ಪದವಿಯನ್ನು ಪಡೆದರು. == ವೃತ್ತಿಜೀವನ == ಅನುರಾಧಾ ಟಿ.ಕೆ. ರವರು ಇಸ್ರೋ ಉಪಗ್ರಹ ಕೇಂದ್ರದಲ್ಲಿ ಭಾರತೀಯ ಜಿಯೋಸಾಟ್ ಪ‍್ರೋಗ್ರಾಮ್ ನ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಜಿಯೋ -ಸಿಂಕ್ರೋನಸ್ ಉಪಗ್ರಹಗಳ ಪ್ರದೇಶಗಳಲ್ಲಿ ಅವರು ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ಹಲವಾರು ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇಸ್ರೋ ಸಂವಹನ ಉಪಗ್ರಹ ಜಿಎಸ್ಎಟಿ-೧೨ ಅನ್ನು ಅಭಿವೃದ್ದಿ ಪಡಿಸುವ ಮತ್ತು ಪ್ರಾರಂಭಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ಅವರು ೨೦ ಎಂಜಿನಿಯರಿಂಗ್ ಗಳ ತಾಂತ್ರಿಕ ಗುಂಪುಗಳ ಮುಖ್ಯಸ್ಥರಾಗಿದ್ದರು. ಮಹಿಳಾ ಸಂಶೋಧನ ತಂಡದ ಅಂಗವಾಗಿ ಹಾಸನದಲ್ಲಿ ಇಸ್ರೋನ ಮಾಸ್ಟರ್ ಕಂಟ್ರೋಲ್ ಫೆಸಿಲಿಟಿ (ಎಂಸಿಎಫ್)ನಿಂದ ಜಿಎಸ್ಎಟಿ -೧೨ ಅನ್ನು ಅದರ ಅಂತಿಮ ಕಕ್ಷೆಗೆ ತಲುಪಿಸಿದರು. ಜಿಎಸ್ಎಟಿ-೧೨ ನೊಂದಿಗೆ ಕೆಲಸ ಮಾಡಿದ ನಂತರ ಅನುರಾಧಾ ಟಿ.ಕೆ.ರವರು ಸೆಪ್ಟೆಂಬರ್ ೨೦೧೨ರಲ್ಲಿ ಅತಿ ದೊಡ್ಡ ಸಂವಹನ ಉಪಗ್ರಹ ಜಿಎಸ್ಎಟಿ -೧೦ ಉಡಾವಣೆ ಮಾಡಿದರು. ಯೋಜನಾ ನಿರ್ದೇಶಕರಾಗಿ ಅವರು ಜಿಎಸ್ಎಟಿ-೯, ಜಿಎಸ್ಎಟಿ-೧೭ ಮತ್ತು ಜಿಎಸ್ಎಟಿ-೧೮ ಸಂವಹನ ಉಪಗ್ರಹಗಳನ್ನು ಉಡಾವಣೆ ಮಾಡಿದರು. ಅವರು ಭಾರತೀಯ ರಿಮೋಟ್ ಸೆನ್ಸಿಂಗ್ ಮತ್ತು ಭಾರತೀಯ ಪ್ರಾದೇಶಿಕ ನ್ಯಾವಿಗೇಷನ್ ಉಪಗ್ರಹ ವ್ಯವಸ್ಥೆ ಕಾರ್ಯಕ್ರಮಗಳಿಗೆ ಪ್ರಾಜೆಕ್ಟ್ ಮ್ಯಾನೇಜರ್, ಡೆಪ್ಯುಟಿ ಪ್ರಾಜೆಕ್ಟ್ ಡೈರೆಕ್ಟರ್ ಮತ್ತು ಅಸೋಸಿಯೆಟ್ ಪ್ರಾಜೆಕ್ಟ್ ಡೈರೆಕ್ಟರ್ ಆಗಿ ಸೇವೆ ಸಲ್ಲಿಸಿದ್ದಾರೆ. == ಪ್ರಶಸ್ತಿಗಳು == ಬಾಹ್ಯಾಕಾಶ ವಿಜ್ಞಾನ ಕ್ಷೇತ್ರದಲ್ಲಿನ ಸೇವೆಗಳಿಗಾಗಿ ಆಸ್ಟ್ರೋನಾಟಿಕಲ್ ಸೊಸೈಟಿ ಆಫ್ ಇಂಡಿಯಾದಿಂದ ೨೦೦೩ರ ಸ್ಪೇಸ್ ಗೋಲ್ಡ್ ಮೆಡಲ್ ಪ್ರಶಸ್ತಿ. ೨೦೧೧ ಐಇಐನ ರಾಷ್ಟ್ರೀಯ ವಿನ್ಯಾಸ ಮತ್ತು ಸಂಶೋಧನಾ ವೇದಿಕೆಯಿಂದ ಸುಮನ್ ಶರ್ಮಾ ಪ್ರಶಸ್ತಿ. ೨೦೧೨ರಲ್ಲಿ ಸಂವಹನ ಬಾಹ್ಯಾಕಾಶನೌಕೆ ಸಾಧನೆಗಾಗಿ ಎಎಸ್ಐ-ಇಸ್ರೋ ಮೆರಿಟ್ ಪ್ರಶಸ್ತಿಗಳು. ೨೦೧೨ರಲ್ಲಿ ಇಸ್ರೋ ಟೀಮ್ ಅವಾರ್ಡ್. == ಉಲ್ಲೇಖಗಳು ==